ಹಿರೋಷಿಮ
	ಎರಡನೆಯ ಮಹಾಯುದ್ಧದ ಕಾಲದಲ್ಲಿ ಅಮೆರಿಕ ಹಾಕಿದ ಅಣುಬಾಂಬಿಗೆ ತುತ್ತಾಗಿ ನಾಶವಾಗಿದ್ದ ಜಪಾನಿನ ಎರಡು ನಗರಗಳಲ್ಲೊಂದು; ಇನ್ನೊಂದು ನಾಗಾಸಾಕಿ ತುತ್ತಾಗಿ ನಾಶವಾಗಿದ್ದ ಜಪಾನಿನ ಎರಡು ನಗರಗಳಲ್ಲೊಂದು. ಈ ನಗರ ಜಪಾನಿನ ದಕ್ಷಿಣದಲ್ಲಿನ ಹಾನ್ ಷ್ಯೂ ದ್ವೀಪದ ಪಶ್ಚಿಮಕ್ಕೆ ಒಂದು ನದಿ ಮುಖಜಭೂಮಿಯಲ್ಲಿದೆ. ಜನಸಂಖ್ಯೆ 10,85,705. 

	ಹಿಂದೆ ಹಿರೋಷಿಮ ಜಪಾನಿ ಬೆಸ್ತರ ಒಂದು ಹಳ್ಳಿಯಾಗಿತ್ತು. ಅಸಾನೊ ಕುಟುಂಬದವರ ಕೋಟೆಪಟ್ಟಣವೆನಿಸಿ ದೊಡ್ಡನಗರವಾಗಿಬೆಳೆಯಿತು(1600-1868). ವ್ಯಾಪಾರ ಸ್ಥಳವಾಗಿ ಬೆಳೆವಣಿಗೆ ಹೊಂದಿತು. ಎರಡನೆಯ ಮಹಾಯುದ್ಧದ ಕಾಲಕ್ಕೆ (1939-45) ಇದೊಂದು ಮುಖ್ಯ ಮಿಲಿಟರಿ ನೆಲೆಯಾಯಿತು. 

	1945 ಆಗಸ್ಟ್ 6 ರಂದು ಹಿರೋಷಿಮ ನಗರದ ಮೇಲೆ ಅಮೆರಿಕ ಅಣುಬಾಂಬನ್ನು ಹಾಕಿತು. ಆಗ ಈ ನಗರದ 13 ಚ.ಕಿಮೀ ಪ್ರದೇಶ ಸಂಪೂರ್ಣ ನಾಶವಾಯಿತು. ಸು. 1 ಲಕ್ಷ ಮಂದಿ ಸತ್ತರು; ಲಕ್ಷಾಂತರ ಜನ ಅಣುವಿಕಿರಣಕ್ಕೆ ತುತ್ತಾದರು; ಗಾಯಗೊಂಡರು, ವಿಕಲಾಂಗರಾದರು. ಮೂರು ದಿನಗಳ ಬಳಿಕ (1945 ಆಗಸ್ಟ್ 9) ನಾಗಾಸಾಕೀ ನಗರದ ಮೇಲೆ ಅಣುಬಾಂಬನ್ನು ಹಾಕಲಾಯಿತು. 1945 ಸೆಪ್ಟೆಂಬರ್ 2ರಂದು ಜಪಾನ್ ಯುದ್ಧ ನಿಲ್ಲಿಸಿ ಶರಣಾಯಿತು. 

	ಅನಂತರದ ದಿನಗಳಲ್ಲಿ ಈ ನಗರ ಕ್ರಮೇಣ ಚೇತರಿಸಿಕೊಂಡಿತು. ಈಗ ಮೊದಲಿಗಿಂತಲೂ ಸುಂದರವಾಗಿ, ಹೆಚ್ಚು ಜನಸಂಖ್ಯೆಯುಳ್ಳದ್ದಾಗಿ ದೊಡ್ಡ ಕೈಗಾರಿಕಾ ನಗರವಾಗಿದೆ. ಆಟೊಮೊಬೈಲ್, ವಿವಿಧ ಯಂತ್ರಗಳು, ಹಡಗು ನಿರ್ಮಾಣ ಮುಂತಾದವುಗಳ ಕೇಂದ್ರವಾಗಿದೆ. ಬಾಂಬು ಬಿದ್ದ ಕೇಂದ್ರಸ್ಥಳದಲ್ಲಿ ಶಾಂತಿವನ ನಿರ್ಮಿಸಲಾಗಿದೆ. ಇಲ್ಲಿ ಪ್ರತಿವರ್ಷ ಆಗಸ್ಟ್ 6ರಂದು ಶಾಂತಿಸಭೆ ಸೇರುತ್ತದೆ. ಅಣುಬಾಂಬಿಗೆ ತುತ್ತಾದ ಒಂದು ದೊಡ್ಡ ಕಟ್ಟಡದ ಅವಶೇಷವನ್ನು  ಬಾಂಬಿನ ವಿನಾಶದ ಗುರುತಾಗಿ, ಭವಿಷ್ಯದ ಜನಾಂಗಕ್ಕೆ ಎಚ್ಚರಿಕೆಯಾಗಿ ಹಾಗೆಯೇ ಉಳಿಸಿಕೊಳ್ಳಲಾಗಿದೆ.		
		
		(ಎ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ